English
Download App from store
author
Indira Udupa
I enjoy reading and writing. My favorite genres are Children, Fiction, Inspiration, Love, Mythology, Spiritual. I have been a part of the Kahaniya community since May 19, 2020.
episodes
No Episodes
author
Indira Udupa
ರಹಸ್ಯ ಪತ್ರ
ನಿಜಕ್ಕೂ ತನ್ನ ಪತಿ ಅಂತಹವನೇ? ತನ್ನ ಕಣ್ಣನ್ನೇ ನಂಬದಾದಳು ಪತ್ರ ಓದಿದ ನಂತರ....ಈ ಕ್ಷಣವೇ ಮಕ್ಕಳನ್ನು ಕರೆದುಕೊಂಡು ತವರಿಗೆ ಹೊರಟುಬಿಡಲೇ? ಅಥವಾ.......... ತನ್ನ ಪಾಲೂ ಇದೆಯೇ ಈ ಪರಿಸ್ಥಿತಿ ಗೆ ತಂದಿಡುವಲ್ಲಿ........
0 views
0 reviews

  " ಪೋಸ್ಟ್"                                                        ಎಂಬ ಕೂಗಿನೊಂದಿಗೆ ಕಿಟಕಿಯಿಂದ ಕವರೊಂದು ಒಳಗೆ ಬಿತ್ತು.. ಹುರಿದು ಖಾರ ಹಾಕಿದ ಗೋಡಂಬಿ ತಿನ್ನುತ್ತಾ ಟಿ.ವಿಯಲ್ಲಿ  ಬರುತ್ತಿದ್ದ ಧಾರಾವಾಹಿ ಒಂದರಲ್ಲಿ ಮಗ್ನಳಾಗಿದ್ದ ಸ್ನೇಹಾ ಉದಾಸೀನತೆಯಿಂದಲೇ ಎದ್ದು ವರಾಂಡಾಕ್ಕೆ ಬಂದು , ಕೆಳಗೆ ಬಿದ್ದಿದ್ದ ಪತ್ರವನ್ನು ಕೈಗೆ ಎತ್ತಿಕೊಂಡಳು. ತನಗೇ  ಬಂದಿರುವ ಪತ್ರ...ಹಿಂದೆ ತಿರುಗಿಸಿ ನೋಡಿದಳು.  ಕಳಿಸಿದವರ ವಿಳಾಸವಿಲ್ಲ. ತನ್ನ  ವಿಳಾಸ ಬರೆದ ಬರವಣಿಗೆ ತನಗೆ  ಪರಿಚಿತವಲ್ಲ. ಯಾರದಿರಬಹುದು???         ಕೈ ತೊಳೆದು ಬಂದು ಕುತೂಹಲದಿಂದ ಕವರಿನ ಬದಿಯನ್ನು ಹರಿದು ಬಿಡಿಸಿ ದಳು. ಒಳಗಿನಿಂದ ತಿಳಿ ಗುಲಾಬಿ ಬಣ್ಣದ, ಪರಿಮಳ ಸೂಸುವ ಕಾಗದವೊಂದನ್ನು ಹೊರಗೆಳೆದು ತೆಗೆದಳು.  ಒಂದು ಮೂಲೆಯಲ್ಲಿ ಹೂವುಗಳ, ಚಿತ್ತಾರದ ಚಿತ್ರಗಳಿದ್ದ ಕಾಗದದಲ್ಲಿ ಮುತ್ತು ಪೋಣಿಸಿದಂತಹ ಅಕ್ಷರಗಳು....   " ಆತ್ಮೀಯ ಸ್ನೇಹಾ ರವರಿಗೆ                       ವಂದನೆಗಳು. ಆಶ್ಚರ್ಯ ಆಗ್ತಾ ಇದೆಯಾ ಯಾರದಪ್ಪ ಈ ಪತ್ರ ಅಂತಾ?? ಇಷ್ಟಕ್ಕೆ ಆಶ್ಚರ್ಯ ಪಟ್ಟರೆ ಹೇಗೆ?  ಇನ್ನೂ ಓದುತ್ತಾ ಓದುತ್ತಾ ದಿಗ್ಭ್ರಮೆಯಿಂದ ಬೀಳುವ ಸಾಧ್ಯತೆ ಇರೋದರಿಂದ ಕುಳಿತುಕೊಂಡು ಈ ಪತ್ರವನ್ನು ಓದಿ ಎನ್ನುವುದು ನನ್ನ ಅತ್ಯಮೂಲ್ಯ ಸಲಹೆ.       ಕುಳಿತುಕೊಂಡಿರಿ ತಾನೇ? ಮುಂದುವರೆಸಲಾ?        ನಿಮ್ಮ ಪತಿದೇವರು, ಶ್ರೀ ವಿಶ್ವಾಸ್ ರವರು ನೀವು ತಿಳಿದಿರುವಂತೆ, ನಂಬಿರುವಂತೆ , ನಿಮ್ಮ ವಿಶ್ವಾಸಕ್ಕೆ ಅರ್ಹರಲ್ಲ. ಈಗೊಂದು ಎರಡು ಮೂರು ತಿಂಗಳಿಂದ ಚೇತನಾ ಎಂಬ  ತೆಳ್ಳಗೆ, ಬೆಳ್ಳಗೆ, ಸುಂದರವಾಗಿರುವ  ಸಣ್ಣ ವಯಸ್ಸಿನ ಯುವತಿಯ ಜೊತೆ ಸುತ್ತಾಡ್ತಾ  ಇದಾರೆ. ಹೋಟೆಲಿಗೆ ಹೋಗುವುದಕ್ಕೆ, ಸಿನಿಮಾ ನೋಡುವುದಕ್ಕೆ ಲೆಕ್ಕ ಇಲ್ಲ. ಬೆಳಗ್ಗೆ ಬೇಗ ಹೋಗಿ, ಸಂಜೆ ತಡವಾಗಿ ಬರ್ತಿದಾರಲ್ಲ ಒಂದೆರಡು ತಿಂಗಳಿಂದ, ನಿಮಗೇನೂ ಸಂದೇಹ ಬರಲಿಲ್ವಾ? ರಜಾ ದಿನಗಳಲ್ಲೂ ಕೆಲಸ ಇದೆ ಅಂತ ಆಫೀಸಿಗೆ ಹೋಗ್ತಿದಾರಲ್ಲ, ಆಗಲೂ ಏನೂ  ಅನ್ನಿಸಲಿಲ್ವಾ?           ನೀವೀಗ ಜಾಗ್ರತೆ ಮಾಡದಿದ್ದರೆ ಇದೆಲ್ಲಿಗೆ ಕೊಂಡುಹೋಗತ್ತೋ ಗೊತ್ತಿಲ್ಲ...ನನಗ್ಯಾಕೆ ಬೇಕು ಈ ಅಧಿಕ ಪ್ರಸಂಗದ ಕೆಲಸ ಅಂತ ಸುಮ್ಮನೆ ಇರಬಹುದಿತ್ತು..ಆದರೆ ಪಾಪ, ನಿಮ್ಮ ಮತ್ತು ಮಕ್ಕಳ ನೆನಪಾಗಿ ಸಂಕಟದಿಂದ ಈ ಪತ್ರ ಬರೀತಾ ಇದೀನಿ. ಆದರೆ ಹುಷಾರು. ನಿಮಗೆ ಈ ವಿಷಯ ಗೊತ್ತಾಗಿ ಹೋಗಿದೆ ಅನ್ನುವುದು ನಿಮ್ಮ ಯಜಮಾನರಿಗೆ ಗೊತ್ತಾಗದ ಹಾಗೆ ನೋಡಿಕೊಳ್ಳಿ. ನಿಧಾನವಾಗಿ ಅವರ ಬಾಯಿ ಬಿಡಿಸಿ. ಅದಕ್ಕೂ ಮುಂಚೆ ಸಾಕ್ಷಿ , ಆಧಾರಗಳನ್ನು ಕಲೆ ಹಾಕಿ.      ಮತ್ತೊಂದು ವಿಷಯ.... ಅಯ್ಯೋ ಹೀಗಾಯ್ತಲ್ಲ ಅಂತ ಖಿನ್ನತೆಗೆ ಒಳಗಾಗೋದು, ಆತ್ಮಹತ್ಯೆ, ಕೊಲೆ, ಗಿಲೆ ಅಂತ ಏನೇನೋ  ಫಜೀತಿ ಮಾಡಿಕೊಳ್ಳಬೇಡಿ. ನಿಮಗಿಬ್ಬರು ಮುದ್ದಾದ ಮಕ್ಕಳು ಇದಾರೆ ಅನ್ನೋದು ನೆನಪಿರಲಿ. ನಿಮ್ಮ ಕಾಲೇಜು ದಿನಗಳಲ್ಲಿ ಇದ್ದಂತಹ ಧೈರ್ಯ, ಸ್ವಾಭಿಮಾನ, ಆತ್ಮಾಭಿಮಾನ, ಸಾಹಸ ಪ್ರವೃತ್ತಿ  ಇನ್ನೂ  ಗಟ್ಟಿಯಾಗಿಯೇ ಇದೆ ಅಂತ ಭಾವಿಸ್ತೀನಿ....ಈ ಇಕ್ಕಟ್ಟಿನಿಂದ ಹೇಗೆ ಪಾರಾಗ್ತೀರಿ ಅಂತ ಕುತೂಹಲದಿಂದ ಕಾಯುತ್ತಿರುವ"                                                      ನಿಮ್ಮ ಹಿತೈಷಿ,                                               **********         ಒಂದಲ್ಲ, ಎರಡಲ್ಲ, ಹತ್ತು ಬಾರಿ ಓದಿದಳು. ನಿಧಾನವಾಗಿ, ವೇಗವಾಗಿ, ಮತ್ತೆ ನಿಧಾನವಾಗಿ, ನಿ......ಧಾ.......ನ.......ವಾ......ಗಿ  ಓದಿದಳು.  ಇಲ್ಲ, ಎಷ್ಟು ಸಲ ಓದಿದರೂ ವಿಷಯ ಅದೇ...ಏನೂ ಬದಲಾಗಲಿಲ್ಲ...         ಪತ್ರದಲ್ಲಿ ತಿಳಿಸಿದಂತೆ ನಿಜಕ್ಕೂ ದಿಗ್ಭ್ರಮೆಯಾಗಿದೆ ತನಗೆ . . ಓದುತ್ತಾ ಓದುತ್ತಾ ಕುರ್ಚಿಯ ಮೇಲೆ ಕುಸಿದಿದ್ದಳು.  ವಿಶ್ವಾಸ್, ತನ್ನ ವಿಶ್ವಾಸ್ ಅಂತಹವನೇ? ಮನಸ್ಸು, ಬುದ್ಧಿ ಆಲೋಚನೆಗೆ ತೊಡಗಿದರೆ ಹೃದಯ ಮಾತ್ರ ಭೋರ್ಗರೆದು ಅಳುತ್ತಿತ್ತು. ಚೀರುತ್ತಿತ್ತು. ಇಲ್ಲಾ... ತನ್ನ ವಿಶ್ವಾಸ್ ಅಂಥಹವನಲ್ಲ. ತನ್ನನ್ನು ಪ್ರೇಮಿಸಿ, ಮನೆಯವರ ಒಪ್ಪಿಗೆ ಪಡೆದು ತನ್ನ ಕೈ ಹಿಡಿದಿದ್ದ. ಉದ್ದಕ್ಕೂ ಒಲವಿನ ಧಾರೆ ಹರಿಸಿದ್ದ.  ತನ್ನ ಗುಣಗಳ ಜೊತೆಯಲ್ಲೇ ತನ್ನ ಬಲಹೀನತೆಗಳನ್ನೂ ಪ್ರೀತಿಸುತ್ತಿದ್ದ.. ತನಗೊಂದು ಚೂರೂ ಬೇಸರ ಮಾಡಿದವನಲ್ಲ. ಹಾಗಾದರೆ?  ಹೃದಯದ ಭಾವನೆಗಳಿಗೆ ಬುದ್ಧಿ ತರ್ಕಿಸಲು ಆರಂಭಿಸಿತು.  ಹೌದು....ಇತ್ತೀಚೆಗೆ ಮೂರು ನಾಲ್ಕು ತಿಂಗಳಿಂದ  ಹೆಚ್ಚು ಹೆಚ್ಚು ಮೌನಿಯಾಗಿ, ದಿನದ ಹೆಚ್ಚಿನ ಸಮಯವನ್ನು , ಮನೆಯಿಂದ ಹೊರಗೆ, ಕೆಲಸದ ನೆಪದಲ್ಲಿ , ಕಳೆದು ಬರುತ್ತಿದ್ದ. ಹೆಚ್ಚಿನ ರಾತ್ರಿ ಊಟ ಬೇಡ ತನ್ನದಾಗಿದೆ ಎಂದು ಹೇಳುತ್ತಿದ್ದ.  ಹಾಗಾದ್ರೆ ಈ ಪತ್ರದ ವಿಚಾರ ಸತ್ಯವೇ ಆಗಿಬಿಟ್ಟಿದ್ದರೆ???  ಸಂದೇಹದ ಹುಳು ತಲೆಯನ್ನು ಕೊರೆಯಲು ಶುರು ಮಾಡಿತು. ಜೊತೆಗೆ ಆತಂಕ, ಗೊಂದಲ, ಗಲಿಬಿಲಿ ಒಂದರ ನಂತರ ಮತ್ತೊಂದು ತನ್ನದೇ ಸಾಮ್ರಾಜ್ಯ ಎಂಬಂತೆ ಅವಳ ಮನವನ್ನು  ಪೂರ್ತಿಯಾಗಿ ಆಕ್ರಮಿಸಿದವು.       ಸ್ವಲ್ಪ ಹೊತ್ತಿನ ನಂತರ ಮತ್ತೊಂದು ಆಲೋಚನೆ ಶುರುವಾಯಿತು . ಯಾರು ಬರೆದಿರಬಹುದು ಈ ಪತ್ರವನ್ನು?  ತನ್ನ, ತನ್ನ ಮನೆಯವರ ಪರಿಚಯ ಚೆನ್ನಾಗಿಯೇ ಇರುವಂತಿದೆ.  ತನ್ನ ಕಾಲೇಜು ದಿನಗಳ ಬಗ್ಗೆಯೂ ಹೇಳುತ್ತಾರೆ ಅಂದರೆ ತನ್ನನ್ನು ಹತ್ತಿರದಿಂದ ಬಲ್ಲವರೇ ಇರಬೇಕು. ಅಕ್ಷರ ನೋಡಿದರೆ ಪರಿಚಿತವಲ್ಲ. ಹಾಗಾಗಿ ತನ್ನ ಗೆಳತಿಯರು ಯಾರೂ ಆಗಿರಲಿಕ್ಕಿಲ್ಲ. ಕಾಗದ ಇದೇ ಊರಿನಲ್ಲೇ ಪೋಸ್ಟ್ ಆಗಿದೆ. !!!!!          ತಲೆ ಗೊಂದಲದ ಗೂಡಾಗಿ  ತಲೆ ತಿರುಗು, ತಲೆ ನೋವು ಎಲ್ಲಾ ಶುರು ಆಯಿತು.  ಹೊಟ್ಟೆ ಹಸಿವಾದರೂ ಊಟ ಮಾಡಬೇಕು ಅಂತ ಅನ್ನಿಸಲಿಲ್ಲ.  ಟಿ.ವಿ.  ತನ್ನ ಪಾಡಿಗೆ ತಾನು  ಕಿರುಚಿಕೊಳ್ಳುತ್ತಿತ್ತು.  ಅದನ್ನು ಬಂದ್ ಮಾಡಬೇಕೆಂದೂ ಅವಳಿಗೆ ಹೊಳೆಯಲಿಲ್ಲ.  ದಂಗು ಬಡಿದವಳಂತೆ ಕುಳಿತೇ ಇದ್ದಳು.           ನಾಲ್ಕು ಘಂಟೆಗೆ ಮಕ್ಕಳ ಶಾಲೆಯ ವ್ಯಾನ್ ಬಂದು ಮಕ್ಕಳನ್ನು ಇಳಿಸಿ ಹೋಯಿತು. ಗೇಟ್ ತೆಗೆದ ಶಬ್ದಕ್ಕೆ ಎಚ್ಚೆತ್ತು ಬಾಗಿಲು ತೆರೆದು ಹೊರಬಂದಳು.  " ಅಮ್ಮಾ" ಎಂದು ಕೂಗುತ್ತಾ ಮಕ್ಕಳೆರಡೂ ತೆಕ್ಕೆಬಿದ್ದವು ಎರಡೂ ಬದಿಯಲ್ಲಿ.  ಮಕ್ಕಳನ್ನು ಮುದ್ದಿಸುತ್ತಾ ಅವರ ಚಿಲಿಪಿಲಿಗೆ ಹೂಂಗುಡುತ್ತಾ ಒಳ ಕರೆತಂದಳು. ಶ್ರೇಯಾ, ಶ್ರವಣ್ ಇಬ್ಬರೂ ಶಾಲಾ ಬ್ಯಾಗ್ ಗಳನ್ನ ಅದರ ಜಾಗದಲ್ಲಿಟ್ಟು, ಕೈ ಕಾಲು, ಮುಖ ತೊಳೆದು ಬಟ್ಟೆ ಬದಲಿಸಿ ಬರುವಷ್ಟರಲ್ಲಿ ತಟ್ಟೆಗಳಲ್ಲಿ ಕುರುಕಲು ತಿಂಡಿಗಳನ್ನು ತುಂಬಿಸಿ ಬಿಸಿ ಮಾಡಿದ ಹಾಲನ್ನು ಲೋಟಗಳಿಗೆ ಹಾಕಿ ಇಟ್ಟಿದ್ದಳು. ಬಲವಂತದ ನಗು ಮುಖದಲ್ಲಿ ಅವರ ಗಲಗಲ ಮಾತುಗಳನ್ನು ಕೇಳಿಸಿ ಕೊಂಡಳು. ಆಟಕ್ಕೆಂದು ಮಕ್ಕಳು ಹೊರಗೋಡಿದ ನಂತರ ಮತ್ತೆ ಮನಸ್ಸು ಚಿಂತಾಕ್ರಾಂತ ವಾಯಿತು. ತಲೆ ನೋಯುತ್ತಿತ್ತು. ಒಂದು ಲೋಟ ಕಾಫಿ ಮಾಡಿಕೊಂಡು ಕುಡಿದಳು. ಏನು ನೋಡಲೂ, ಮಾಡಲೂ  ಮನಸ್ಸಿಲ್ಲದೆ ಪೇಚಾಟ. ಮೈ ವಿಪರೀತ ಭಾರ ಎನಿಸುತ್ತಿತ್ತು.               ( ಮುಂದುವರೆಯುವುದು)                        

© All rights reserved
Reviews (0)