English
Download App from store
author
Indira Udupa
I enjoy reading and writing. My favorite genres are Children, Fiction, Inspiration, Love, Mythology, Spiritual. I have been a part of the Kahaniya community since May 19, 2020.
episodes
No Episodes
author
Indira Udupa
ರಹಸ್ಯ ಪತ್ರ
ತನ್ನ ಹೆಸರಿಗೆ ಬಂದ ಅನಾಮಧೇಯ ಪತ್ರ ಓದಿದ ಸ್ನೇಹಾಳ ಪಾಡೇನಾಯಿತು? ...........ಮುಂದೆ ಓದಿ
0 views
0 reviews

  ಆರೂವರೆಯ ಹೊತ್ತಿಗೆ ಆಟ ಮುಗಿಸಿ ಬಂದ ಮಕ್ಕಳು ಪುಸ್ತಕಗಳನ್ನು ಹರಡಿಕೊಂಡು ಹೋಮ್ ವರ್ಕ್ ಮಾಡಲು ಕುಳಿತಾಗ ಸಹಾಯ ಮಾಡಲು ಸ್ನೇಹಾಳೂ ಕೂರಬೇಕಾಯ್ತು. ಬೆಳಗಿನ ಅಡಿಗೆಯೇ ರಾತ್ರಿಗೂ ಉಳಿದಿದ್ದರಿಂದ ಮತ್ತೇನೂ ಮಾಡುವಷ್ಟಿರಲಿಲ್ಲ. ಮಕ್ಕಳ ಹೋಮ್ ವರ್ಕ್ ಮುಗಿದ ನಂತರ ನಿತ್ಯದಂತೆ ದೇವರ ದೀಪ ಹಚ್ಚಿ, ಮಕ್ಕಳ ಜೊತೆ ಕುಳಿತು ಭಜನೆ ಮಾಡಿದಳು. ಮಕ್ಕಳು ಆಟ ಆಡುವಾಗ ತಾನೂ ಅವರ ಜೊತೆಗೆ ಸೇರಿಕೊಂಡಳು. ಎಂಟೂವರೆಯ ಹೊತ್ತಿಗೆ ವಿಶ್ವಾಸ್ ಬಂದ. ಬೈಕ್ ಶಬ್ದ ಕೇಳುತ್ತಿದ್ದಂತೆ "ಅಪ್ಪ ಬಂದ್ರೂ.... ಅಪ್ಪ ಬಂದ್ರೂ"   ಕುಣಿಯುತ್ತ  ಹೊರಗೋಡಿದವು.  ಎರಡೂ ಕೈಗಳಿಂದ ಅವುಗಳನ್ನು ಹಿಡಿದುಕೊಂಡು ಮಾತಾಡುತ್ತ ಒಳಗೆ ಬಂದ ವಿಶ್ವಾಸನ ಮುಖ ನೋಡಲಾಗದೆ ಸ್ನೇಹಾ ಅಡಿಗೆ ಮನೆ ಸೇರಿದಳು.         ರಾತ್ರಿಯಿಡೀ ತನಗೆ ಆಲೋಚನೆ ಮಾಡಲು ಪುರುಸೊತ್ತಿದೆ. ಮಕ್ಕಳಿಗೋಸ್ಕರವಾದರೂ ತನ್ನ ನಡವಳಿಕೆ ಸಹಜವಾಗಿರಬೇಕು ಎಂದುಕೊಳ್ಳುತ್ತಾ ಮನಸ್ಸು ಗಟ್ಟಿ ಮಾಡಿಕೊಂಡಳು. ಅಡಿಗೆ ಬಿಸಿ ಮಾಡಿ ಊಟದ ಮೇಜಿಗೆ ತಂದಿಟ್ಟು ತಟ್ಟೆಗಳನ್ನಿಟ್ಟಳು.  " ಎಲ್ಲರೂ ಬನ್ನಿ ಊಟಕ್ಕೆ" ಜೋರಾಗಿ ಕರೆದಳು. ಗಂಡ, ಮಕ್ಕಳು ನಗುತ್ತ, ಮಾತನಾಡುತ್ತ ಬಂದು ಕುಳಿತ ನಂತರ  ಮೌನವಾಗಿ ಬಡಿಸಲು ಆರಂಭಿಸಿದಳು. ಅನ್ನದ ಪಾತ್ರೆಯನ್ನು ನೋಡಿದ ವಿಶ್ವಾಸನ ಮುಖ ಬಿಗಿದುಕೊಂಡಿತಾದರೂ ಬಾಯಿ ಬಿಟ್ಟು ಏನೂ ನುಡಿಯದೆ ಊಟ ಆರಂಭಿಸಿದ. ಮಕ್ಕಳ ಮಾತಿಗೆ ಉತ್ತರಿಸುತ್ತಾ ಗಂಡನನ್ನೇ ದಿಟ್ಟಿಸಿ ನೋಡುತ್ತಿದ್ದಳು.  ಅವನಿಗೆ ಅವಳ ದಿಟ್ಟ ನೋಟದ  ಅರಿವಾಗಿ ತಲೆಯೆತ್ತಿ ಅವಳ ದೃಷ್ಟಿಗೆ ದೃಷ್ಟಿ ಬೆರೆಸಿದ. ಇಲ್ಲ. ಆ ಕಂಗಳಲ್ಲಿ ಕೊಂಚವೂ ತಪ್ಪಿತಸ್ಥ ಭಾವನೆ ಕಾಣಿಸಲಿಲ್ಲ. ಯಾವುದೇ ಹಿಂಜರಿಕೆ ಇಲ್ಲದೆ ತನ್ನ ನೋಟವನ್ನು ಎದುರಿಸುತ್ತಿದ್ದಾನೆ ತನ್ನ ಪತಿ.               " ಅದೇನು ಹಾಗೆ ನೋಡ್ತಿದ್ದೀ ಸ್ನೇಹಾ?"  ಕೇಳಿದ.                 " ಏನೂ ಇಲ್ಲಪ್ಪ. ಇವತ್ತೇನೋ ಸ್ವಲ್ಪ ಬೇಗ ಬಂದ ಹಾಗಿದೆ ಮನೆಗೆ !  ಕೆಲಸ ಇರಲಿಲ್ವಾ?"  ತಾನೂ ಪ್ರಶ್ನೆ ಹಾಕಿದಳು.                 " ಹಾಂ. ಇವತ್ತು ಕೆಲಸ ಕೊಂಚ ಕಡಿಮೆ ಇತ್ತು."   ಮತ್ತೆ ಅನ್ನ ಬಡಿಸಲು ಹೋದವಳ ಕೈ ತಡೆದ. " ಬೇಡ ಅನ್ನ ನಂಗೆ. ಒಂದು ಲೋಟ ತಿಳಿ ಸಾರು, ಒಂದು ಲೋಟ ಮಜ್ಜಿಗೆ ಕೊಟ್ಟುಬಿಡು ಸಾಕು. "               " ಯಾಕೆ, ಪಾರ್ಟಿ ಏನಾದ್ರೂ ಇತ್ತಾ ಆಫೀಸಲ್ಲಿ?" ವ್ಯಂಗವಾಗಿ ಕೇಳಿದಳು.          " ಇಲ್ಲಾ. ಪಾರ್ಟಿ ಏನೂ ಇರಲಿಲ್ಲ. ಆದ್ರೆ ರಾತ್ರಿ ಹೊತ್ತು ನಾನು ಅನ್ನ ತಿನ್ನೋಕೆ ಇಷ್ಟ ಪಡಲ್ಲ ಅಂತ ಗೊತ್ತಿದೆಯಲ್ಲ ನಿನಗೆ !!"  ಸರಳವಾಗಿ ಉತ್ತರಿಸಿದ ವಿಶ್ವಾಸ್. ಸುಮ್ಮನಾಗಬೇಕಾಯ್ತು ಸ್ನೇಹಾ. ಇದು ಎಷ್ಟನೇ ಬಾರಿಯೋ ಅವನ ಬಾಯಿಂದ ಈ ಮಾತು. .ಮತ್ತೂ ಅದನ್ನೇ ಕೇಳ್ತಾ ಇರ್ತೀನಲ್ಲ ಅಂತ ಮೊದಲ ಬಾರಿಗೆ ಆವಳಿಗೆ ತನ್ನ ಮೇಲೇ ನಾಚಿಕೆಯಾಯಿತು.          ಬೆಳಗ್ಗೆ ಊಟ ಮಾಡದೇ ಇದ್ದುದರಿಂದ ಹಸಿವೆ ಜೋರಾಗಿತ್ತು. ತಟ್ಟೆಯ ಮುಂದೆ ಕುಳಿತು ಉಳಿದುದನ್ನೆಲ್ಲ ಖಾಲಿ ಮಾಡಿದಳು. ಪಾತ್ರೆಗಳನ್ನು ಸಿಂಕಿಗೆ ಹಾಕಿ, ಊಟದ ಮೇಜು, ಅಡಿಗೆ ಮನೆಯನ್ನೆಲ್ಲ ಚೊಕ್ಕ ಮಾಡಿ ಬರುವಷ್ಟರಲ್ಲಿ ಹೊಟ್ಟೆ ಭಾರದಿಂದಾಗಿ ಸಾಕು ಸಾಕಾಯಿತು.  ಮಕ್ಕಳಿಗೆ ಹಾಲು ಕೊಟ್ಟಳು.  ಕುಡಿದು , ಹಲ್ಲುಜ್ಜಿ ಬಂದ ಮಕ್ಕಳು ಅಪ್ಪನ ಅಕ್ಕ ಪಕ್ಕ ಮಲಗಿ ಮಾತನಾಡುತ್ತಾ ಹಾಗೇ ನಿದ್ದೆ ಮಾಡಿದವು.  ಸ್ನೇಹಾ ಹಾಲಿನಲ್ಲಿದ್ದ ಸೋಫಾದ ಮೇಲೆ ಕುಳಿತು ಯಾವುದೋ ವಾರಪತ್ರಿಕೆಯ ಮೇಲೆ ಕಣ್ಣಾಡಿಸುತ್ತ 11 ಗಂಟೆಯವರೆಗೆ ಕುಳಿತೇ ಇದ್ದಳು. ನಂತರ ನಿಧಾನವಾಗಿ ಬ್ರಷ್ ಮಾಡಿ ಬರುವಷ್ಟರಲ್ಲಿ ಮೂವರೂ ಮಲಗಿಯಾಗಿತ್ತು.  ಮಕ್ಕಳ ಹೊದಿಕೆಗಳನ್ನು ಸರಿಪಡಿಸಿ ತನ್ನ ಜಾಗದಲ್ಲಿ ಬಂದು ಮಲಗಿದಳು.  ನಿದ್ದೆ ಅವಳಿಂದ ಬಲು ದೂರ ಓಡಿತ್ತು....         ಏನು ಮಾಡಲಿ ತಾನೀಗ?  ನೇರವಾಗಿ ಕೇಳಿ ಬಿಡಲಾ? ಏನಂತ ಕೇಳಲಿ? ಹೇಗೆ ಕೇಳಲಿ???? ಹೌದು ಅಂತ ಅವನು ಏನಾದ್ರೂ ಒಪ್ಪಿಬಿಟ್ಟರೆ ತನ್ನ ಗತಿಯೇನು? ಮಕ್ಕಳ ಗತಿಯೇನು? ಒಂದು ವೇಳೆ ಅವನು ಇಲ್ಲ ಎಂದು ಹೇಳಿದ್ರೂ ಅದು ನಿಜಾನೋ, ಸುಳ್ಳೋ ಕಂಡುಹಿಡಿಯುವ ಬಗೆ ಹೇಗೆ?? ಸಂಶಯ ಪಿಶಾಚಿ ಒಮ್ಮೆ ತಲೆ ಹೊಕ್ಕಿತೆಂದರೆ ಮತ್ತೆ ಅಲ್ಲಿಂದ ಅದನ್ನು ಹೊರದೂಡುವ ಕಾರ್ಯ ಅಸಾಧ್ಯವೇ ಸರಿ. !!!!!                   ತನ್ನ ತವರು ಮನೆಗೆ ಸುದ್ಧಿ ಮುಟ್ಟಿಸಲಾ?  ಬೇಡಪ್ಪಾ ಬೇಡ....ಮೊದಲೇ ತಾಯಿ ತಂದೆ ಇಬ್ಬರೂ ವಯಸ್ಸಾದವರು, ಕಾಯಿಲೆ ಮನುಷ್ಯರು. ತನ್ನ ಯೋಚನೆಯನ್ನೂ ತಲೆಗೆ ಹಾಕಿಕೊಂಡರೆ ಕಷ್ಟ..         ತನ್ನ ಸ್ನೇಹಿತೆಯರ ಸಹಾಯ ಕೇಳಲೇ?? ಎಲ್ಲರೂ ಅವರವರ ಸಂಸಾರ ತಾಪತ್ರಯ ಗಳಲ್ಲಿ ಮುಳುಗಿ ಹೋಗಿದಾರೆ.  ಅದೂ ಹತ್ತಿರದಲ್ಲೂ ಇಲ್ಲ.  ಇದ್ದುದರಲ್ಲಿ ಹತ್ತಿರ ಎಂದರೆ ಕಳೆದ ತಿಂಗಳಷ್ಟೇ ದೆಹಲಿಯಿಂದ ವರ್ಗಗೊಂಡು ಇದೇ ಊರಿಗೆ ಬಂದಿರುವ ರಂಜನಾ...ಬಾಲ್ಯದಿಂದ ಶುರುವಾದ ಸ್ನೇಹ ಕಾಲೇಜ್ ಓದು ಮುಗಿಯುವ ತನಕ ಬೆಳೆದು ಗಟ್ಟಿಯಾಗಿತ್ತು. ಮದುವೆಯಾದ ನಂತರವೂ ವರ್ಷಕ್ಕೊಮ್ಮೆಯಾದರೂ ಭೇಟಿಯಾಗಿ ಗಂಟೆಗಟ್ಟಲೆ ಹರಟುವಷ್ಟು ಸ್ನೇಹ ಮುಂದುವರೆದಿತ್ತು. ಅರ್ಧ ಗಂಟೆ ಪ್ರಯಾಣ ಆಟೋದಲ್ಲಿ ಅವರ ಮನೆಗೆ. ಹೋಗದೆ ಹಾಗೆ ಫೋನ್ ಮಾಡಿದರೂ ನಡೆಯತ್ತೆ. ಆದರೆ ಇದನ್ನೆಲ್ಲಾ ಫೋನ್ ನಲ್ಲಿ ಹೇಳಕ್ಕೆ ಆಗಲ್ಲ.          ರಂಜನಾಳ ನೆನಪಾಗಿ ಮನ ಕೊಂಚ ತಿಳಿಯಾಯಿತು. ಕಳೆದ ವಾರವಷ್ಟೇ ಅವಳ ಮನೆಗೆ ಆಹ್ವಾನ ಕೊಟ್ಟಿದ್ದಳು. ಸಂಭ್ರಮದಿಂದ ಗಂಡ, ಮಕ್ಕಳನ್ನೂ ಹೊರಡಿಸಿಯೇ ಬಿಟ್ಟಿದ್ದಳು ಸ್ನೇಹಿತೆಯ ಮನೆಗೆ. ರಂಜನಾಳ ಪತಿ ಅರುಣ್ ನ ಪರಿಚಯ ವಿಶ್ವಾಸನಿಗೂ ಇದ್ದ ಕಾರಣ ಎಲ್ಲರೂ ಖುಷಿಯಲ್ಲೇ ಹೊರಟಿದ್ದರು. ಆದರೆ????           ಆದರೆ ಅಲ್ಲಿ ನಡೆದದ್ದು ನೆನಪಾಗಿ ಮನ ಮತ್ತೆ ಮುದುಡಿ ಹೋಯ್ತು.  ಎಷ್ಟೋ ವರ್ಷಗಳ ನಂತರ ಸ್ನೇಹಿತೆಯ ಭೇಟಿ. ಅವಳು ಉತ್ತರ ಭಾರತದ ಕಡೆ ಹೋದಾಗಲಿಂದ ಕೇವಲ ಫೋನ್ ನಲ್ಲಿ ಮಾತಾಡುವುದು , ಅದೂ ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿಗೆ ಸೀಮಿತ ಆಗಿ ಹೋಗಿತ್ತು. ಈಗ ತಿಂಗಳ ಹಿಂದೆ ಗಂಡನಿಗೆ ವರ್ಗವಾದ ಕಾರಣ ಊರಿಗೆ ಬಂದಿಳಿದಿದ್ದ ರಂಜನಾ ಮನೆಯ ವ್ಯವಸ್ಥೆ ಎಲ್ಲ ಮುಗಿದ ಕೂಡಲೇ ಸ್ನೇಹಾಳ ಕುಟುಂಬವನ್ನು ಊಟಕ್ಕೆ  ಬರುವಂತೆ  ಆಹ್ವಾನ ಕೊಟ್ಟಿದ್ದಳು. ಅವಳನ್ನೂ, ಅರುಣ್ ನನ್ನೂ, ಅವಳ ಮಗಳು ಕವನಳನ್ನೂ  ನೋಡುವ ಖುಷಿಯಲ್ಲಿ  ಚಂದವಾಗಿ ಅಲಂಕರಿಸಿಕೊಂಡು ಹೋದವಳು ಓಡಿ ಹೋಗಿ ರಂಜನಾಳನ್ನು ಅಪ್ಪಿಕೊಂಡಿದ್ದಳು. ವರ್ಷಗಳ ನಂತರವೂ ಒಂದು ಚೂರೂ ಬದಲಾಗದ ಸ್ನೇಹಿತೆಯ ನೋಡಿ ಒಂದು ಕ್ಷಣ ಹೊಟ್ಟೆಕಿಚ್ಚು ಭುಗಿಲೆದ್ದ ಪರಿ ಕಂಡು ತನ್ನ ಮೇಲೆ ಒಂದು ಕ್ಷಣ ಬೇಸರಗೊಂಡಿದ್ದಳು.              ಆದರೆ ರಂಜನಾ ಹೇಳಿದ್ದೇನು? ಇದ್ದದ್ದು ತಾವಷ್ಟೇ ಜನ. ಆದರೂ ಗಂಡ, ಮಕ್ಕಳ ಎದುರು, ಅರುಣ್ ಎದುರು ಹೇಗೆ ಮಾತನಾಡಿ ಬಿಟ್ಟಳು?? ಅಬ್ಬಾ....ಅದನ್ನು ನೆನಪಿಸಿಕೊಳ್ಳಲಿಕ್ಕೆ  ಸಹಾ ಬೇಜಾರಾಗುತ್ತದೆ.  ಅವತ್ತು ಊಟವನ್ನು ತೃಪ್ತಿಯಿಂದ ತಿನ್ನಲಾಗದ ಮನಸ್ಥಿತಿ ತನ್ನದಾಗಿತ್ತು. ಬೇರೆ ಯಾರ ಮನೆಯೇ ಆಗಿದ್ದರೂ ಕೂಡಲೇ ಮನೆಗೆ ಹಿಂತಿರುಗುವವಳೇ ತಾನು. ರಂಜನಾ ಅರುಣ್ ಮನೆ ಆದ್ದರಿಂದ ಬಿಟ್ಟು ಹೊರಡಲು ಅಸಾಧ್ಯವಾಗಿತ್ತು . ಅದೇ ಮನಸ್ಥಿತಿಯಲ್ಲಿ ತನ್ನ ಮನೆಗಿಂತ ವಿಸ್ತಾರದಲ್ಲಿ ಕೊಂಚ ಚಿಕ್ಕದೇ ಆದ ಅವಳ ಮನೆಯನ್ನು ನೋಡಿ ದಂಗಾಗಿ ಹೋಗಿದ್ದಳು....ಅದೆಷ್ಟು ಕಲಾತ್ಮಕವಾಗಿ ಸಿಂಗರಿಸಿದ್ದಳು ಮನೆಯನ್ನು ರಂಜನಾ. ಶುಭ್ರ, ಅಚ್ಚುಕಟ್ಟು, ಎಷ್ಟು ಬೇಕೋ ಅಷ್ಟೇ ಸಾಮಗ್ರಿಗಳು...ಹೊಸ ಮನೆಯಲ್ವಾ  ಅಂತ ಸಮಾಧಾನ ಪಟ್ಟುಕೊಳ್ಳಲೂ ಆಗದು. ಏಕೆಂದರೆ ಕಟ್ಟಿ ಹತ್ತು ವರುಷ ಕಳೆದ ಮನೆಗೆ ಹೋಗಿರುವುದು ಅವರು ಬಾಡಿಗೆಗೆ.  ತನ್ನ ಬೇಸರದ ಮನಃಸ್ಥಿತಿ ರಂಜನಾಳನ್ನ, ಅವಳ ಮನೆಯನ್ನು ಮೆಚ್ಚುವಂತಿತ್ತೇ? ಇಲ್ಲ. ಖಂಡಿತಾ ಇಲ್ಲ . ಬದಲು ಅಸಹನೆ, ಅಸೂಯೆ ಹೆಡೆ ಎತ್ತಿ ನಿಂತಿದ್ದವು.          ಮನೆಗೆ ಬಂದೊಡನೆ ವಿಶ್ವಾಸನ ಹತ್ತಿರ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳೋಣ ಎಂದರೆ ಆ ವಿಷಯ ಎತ್ತೋಕೆ ತನಗೆ ಬಿಗುಮಾನ. ವಿಶ್ವಾಸ್ ನದು ಅತಿ ಮೌನ. ಇಲ್ಲಿಯ ತನಕ ತನಗೆ ತಾಳ್ಮೆಯಿಂದ ತಿಳಿಹೇಳುವ ಪರಿ ಬಿಟ್ಟರೆ ಸ್ವರ ಏರಿಸಿದವನಲ್ಲ.  ನಿಧಾನ ಗತಿಯಲ್ಲಿ ಹೇಳುವವನು ಅವನು. ಅವನ ಎಣಿಕೆಯ ಹಾಗೆ ತಾನು ನಡೆಯದ ಪಕ್ಷದಲ್ಲಿ ಮತ್ತೆ ಆ ವಿಷಯವನ್ನೇ ಎತ್ತುವುದಿಲ್ಲ . ತಾನಾಗಿ ಕೇಳಿದರೆ ಮಾತ್ರ ಅದರ ಬಗ್ಗೆ ತನ್ನ ಅಭಿಪ್ರಾಯ ಹೇಳುವವನು.  ರಂಜನಾ ಹೇಳಿದ ಮಾತನ್ನು ಅವನು ಯಾವಾಗಲೋ ಹೇಳಿ ಆಗಿದೆ. ಆದರೆ ಅವಳ ಹಾಗೆ ನೇರವಾಗಿ, ನಿಷ್ಠುರವಾಗಿ ಅಲ್ಲ.... ತಾನವನ ಮಾತಿಗೆ ಸೊಪ್ಪು ಹಾಕದೆ ಇದ್ದಿದ್ದರಿಂದ ಅವನೀಗ ಅದರ ಬಗ್ಗೆ ಮಾತೇ ಆಡುವುದಿಲ್ಲ.  ತಾನೇ ಆ ವಿಷಯ ಎತ್ತಲು  ಸಂಕೋಚ, ಸ್ವಲ್ಪ ಅವಮಾನ. ....         ಆದರೆ ಗಂಡನಾಗಿ ಅವನು ನನ್ನ ಬೇಸರವನ್ನು, ನೋವನ್ನು ಅರ್ಥ ಮಾಡಿಕೊಳ್ಳಬೇಕಿತ್ತು ತಾನೇ?               " ನಿನ್ನ ಸ್ನೇಹಿತೆ ಹೇಳಿದ ಮಾತು ನಿನಗೆ ತುಂಬಾ ನೋವು ಕೊಟ್ಟಿದೆ ಅಂತ ನಂಗೆ ಗೊತ್ತಾಯ್ತು" ಅಂತ ಒಂದು ಮಾತು ಹೇಳಬಹುದಿತ್ತು....ಅದನ್ನೂ ಹೇಳಲಿಲ್ಲ ಅಂದ್ರೆ? ಗಂಡನ ಬಗ್ಗೆ ಇದ್ದ ಕೋಪ ಒಂದು ಮೆಟ್ಟಿಲು ಜಾಸ್ತಿ ಏರಿತು.  ಕೂಡಲೇ ಅವಳ ತಾರ್ಕಿಕ ಬುದ್ಧಿ ಸವಾಲು ಹಾಕಿತು. 'ಒಂದು ವೇಳೆ ಗಂಡ ಹಾಗೆ ಹೇಳಿದ್ರೆ , " ನೋಡಿದ್ಯಾ? ನಂಗೆ ಬೇಸರವಾಗಿದೆ ಅಂತ ಗೊತ್ತಿದ್ದೂ ಮತ್ತೆ ಮತ್ತೆ ಅದನ್ನು ಕೆದಕುತ್ತ ಇದಾನೆ " ಅಂತ ಮತ್ತೊಂದು ವರಸೆ ತೆಗೆಯುತ್ತಾ ಇರ್ತಿದ್ದೆ ನೀನು'!!!         ತನ್ನ ಯೋಚನೆಯ ಧಾಟಿಗೆ ಅವಳಿಗೇ ನಗು ಬಂತು. ಹೌದು, ತಾನು ಮಾಡುವುದೇ ಹಾಗೆ. ಪಾಪ. ವಿಶ್ವಾಸ್ ಆಗಿದ್ದಕ್ಕೆ ತನ್ನ ಪಾಡಿಗೆ ತನ್ನನ್ನು ಬಿಟ್ಟಿದ್ದಾನೆ. ಬೇರೆ ಯಾರಾದ್ರೂ ಆಗಿದ್ರೆ??   ಗಂಡನ ಮೇಲಿನ ಸಿಟ್ಟು ಎರಡು ಮೆಟ್ಟಲು ಕೆಳಗಿಳಿಯಿತು.         ಅಷ್ಟಕ್ಕೂ ರಂಜನಾ ಅವತ್ತು ಹೇಳಿದ ಮಾತಾದರೂ ಏನು?.........................( ಮುಂದುವರೆಯುವುದು)                               

© All rights reserved
Reviews (0)